ಪ್ರಾದೇಶಿಕ ಯೋಜನೆ

 	ಯಾವುದೇ ವಿಸ್ತøತವಾದ ದೇಶದಲ್ಲಿ ಆರ್ಥಿಕ ಸಂಪನ್ಮೂಲಗಳು ದೇಶದ ಪ್ರತಿಯೊಂದು ವಿಭಾಗಗಳಲ್ಲೂ ಒಂದೇ ಸಮನಾಗಿ ಹರಡಿಕೊಂಡಿರಲಾರವು. ಖನಿಜಗಳು, ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿ ಮತ್ತು ವಿದ್ಯುತ್ತು. ಕೃಷಿಗೆ ಅಗತ್ಯವಾದ ಉತ್ತಮ ಭೂಮಿ ನೀರು ಮುಂತಾದವು ಅಸಮಾನವಾಗಿಯೆ ಪಸರಿಸುತ್ತದೆ. ಕೆಲವು ಪ್ರದೇಶಗಳು ಉಳಿದವುಗಳಿಗಿಂತ ಹೆಚ್ಚು ಸಂಪನ್ನವಾಗಿರುತ್ತವೆ.

	ಆದರೆ ಲಾಭೋದ್ದೇಶದ ಉದ್ಯಮಶೀಲತೆ ಹೆಚ್ಚು ಸಂಪದ್ಯುಕ್ತ ಪ್ರದೇಶಗಳಿಗೇ ಪ್ರಾಶಸ್ತ್ಯನೀಡಿ ಉಳಿದ ಪ್ರದೇಶಗಳನ್ನು ಕಡೆಗಣಿಸುವುದರಿಂದ ಪ್ರದೇಶಗಳ ಅಸಮ ಬೆಳವಣಿಗೆ ಉಂಟಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಔದ್ಯೋಗಿಕ ಒತ್ತಡ ಏರ್ಪಡುತ್ತದೆ. ಒಂದೇ ಬಗೆಯ ಸರಕನ್ನು ತಯಾರಿಸುವ ಅನೇಕ ಉದ್ಯಮಗಳು ಹುಟ್ಟಿಕೊಳ್ಳುತ್ತವೆ. ಇಂಥ ಸಾಂದ್ರೀಕರಣ ಜನರ ವಲಸೆಗಾರಿಕೆ, ನಗರದ ಜನದಟ್ಟಣೆ ಮತ್ತು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದೇ ಕಡೆಯಲ್ಲಿ ಕೈಗಾರಿಕೆಗಳ ಸಾಂದ್ರೀಕೃತ ಬೆಳವಣಿಗೆಯಿಂದ ಉತ್ಪಾದನೆಯ ವೆಚ್ಚ ಏರುವುದರಿಂದ ಸ್ಪರ್ಧಾನಿರತರಾದ ಉತ್ಪ್ಪಾದಕರು ತಾವಾಗಿಯೇ ಇತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವರೆಂದೂ ಆದ್ದರಿಂದ ಸ್ಪರ್ಧೆಯ ಜಗತ್ತಿನಲ್ಲಿ ಕ್ರಮೇಣ ಸಹಜವಾಗಿಯೇ ಪ್ರಾದೇಶಿಕ ಸಮತೋಲ ಏರ್ಪಡುವುದೆಂದೂ ವಾದಿಸಲಾಗಿದೆ.

	ಆದರೆ ಈ ಪ್ರಕ್ರಿಯೆ ದೀರ್ಘಕಾಲದ್ದಾದ್ದರಿಂದ ಸಮಾಜದ ದೃಷ್ಟಿಯಲ್ಲಿ ತಾಪದಾಯಕವೂ ಸಂಪನ್ಮೂಲಗಳ ವೃಥಾ ನಷ್ಟಕ್ಕೆ ಕಾರಣವೂ ಆಗಬಹುದು. ಅಲ್ಲದೆ ಪರಿಪೂರ್ಣ ಸ್ಪರ್ಧಾತ್ಮಕ ಪರಿಸ್ಥಿತಿ ಕೇವಲ ಆದರ್ಶವಷ್ಟೆ. ಆದ್ದರಿಂದ ಪ್ರಾದೇಶಿಕ ಅಸಮತೆ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಹೋಗುತ್ತದೆ. ಇಂಥ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಪ್ರಾದೇಶಿಕ ಯೋಜನೆಗಳನ್ನು ಜಾರಿಗೆ ತರುವುದು ಅಗತ್ಯವೆನಿಸುತ್ತದೆ. ಭೂಮಿಯ ಯಾವುದೇ ಪ್ರದೇಶದ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲಗಳ ಕಾರ್ಯಾತ್ಮಕ (ಫಂಕ್ಷನಲ್) ಸಂಘಟನೆಯ ವ್ಯವಸ್ಥಾತ್ಮಕ ಅಧ್ಯಯನ ಹಾಗೂ ಅನುಷ್ಠಾನವನ್ನು ಪ್ರಾದೇಶಿಕ ಯೋಜನೆಯೆಂದು ಕರೆಯಲಾಗಿದೆ. ರಾಜ್ಯಶಾಸ್ತ್ರಜ್ಞರು, ಎಂಜನಿಯರುಗಳು, ಸಮಾಜಶಾಸ್ತ್ರಜ್ಞರು, ಭೂಗೋಳಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು ಮುಂತಾದವರು ಪ್ರಾದೇಶಿಕ ಯೋಜನೆಗೆ ಹೆಚ್ಚು ಹೆಚ್ಚು ಗಮನ ನೀಡತೊಡಗಿದ್ದಾರೆ. ಒಂದು ಅಥವಾ ಹೆಚ್ಚು ದೇಶಗಳಲ್ಲಿ ಹರಡಿರುವ ವಿಸ್ತಾರವಾದ ಭೂಪ್ರದೇಶವಾಗಲಿ ಯಾವುದೊಂದು ನದೀಕಣಿವೆ ಅಥವಾ ನಗರ ವಸತಿ ಪ್ರದೇಶದಂಥ ಹೆಚ್ಚು ಸೀಮಿತ ಪ್ರದೇಶವಾಗಲಿ ಇಂಥ ಯೋಜನೆಗೆ ಒಳಪಡಬಹುದು. ಐರೋಪ್ಯ ಆರ್ಥಿಕ ಸಮುದಾಯ (ನೋಡಿ- ಐರೋಪ್ಯ-ಆರ್ಥಿಕ-ಸಮುದಾಯ) ಕೊಲಂಬೋ ಯೋಜನೆ (ನೋಡಿ- ಕೊಲಂಬೋ-ಯೋಜನೆ) ಇವು ಅಂತರರಾಷ್ಟ್ರೀಯ ಪ್ರಾದೇಶಿಕ ಯೋಜನೆಗಳ ಉದಾಹರಣೆಗಳು. ಇವು ಹಲವು ರಾಷ್ಟ್ರಗಳನ್ನು ಇಡಿಯಾಗಿ ಒಳಗೊಂಡ ಯೋಜನೆಗಳು. ಎರಡು ಅಥವಾ ಹೆಚ್ಚು ರಾಷ್ಟ್ರಗಳನ್ನು ಭಾಗಗಳನ್ನು ಒಳಗೊಳ್ಳುವವೆಂದರೆ ಸೇಂಟ್ ಲಾರೆನ್ಸ್ ಸಮುದ್ರ ದ್ವಾರ, ನೈಲ್ ನದಿ ಕಣಿವೆ ಮತ್ತು ಮೆಕಾಂಗ್ ನದಿ ಯೋಜನೆಗಳು. ಒಂದೇ ದೇಶದಲ್ಲಿ ಹಲವು ರಾಜ್ಯಗಳ ಭಾಗಗಳನ್ನೊಳಗೊಳ್ಳುವ, ಆ ರಾಜ್ಯಗಳ ಪರಸ್ಪರ ಸಹಕಾರ ಅಗತ್ಯವಾಗಿರುವ ಯೋಜನೆಗಳ ಉದಾಹರಣೆಗಳು ಅಮೆರಿಕದ ಟೆನಸೀ ಕಣಿವೆ ಪ್ರಾಧಿಕಾರ (ನೋಡಿ- ಟೆನಸೀ-ಕಣಿವೆ-ಪ್ರಾಧಿಕಾರ) ಮತ್ತು ಭಾರತದ ದಾಮೋದರ್ ಕಣಿವೆ ಯೋಜನೆ. 			 (ನೋಡಿ- ದಾಮೋದರ್-ಕಣಿವೆ-ಯೋಜನೆ)

	ಪ್ರಾದೇಶಿಕ ಯೋಜನಾ ತಂತ್ರಗಳು ಹಾಗೂ ಕಾರ್ಯಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ ಮೂಲತತ್ತ್ವಗಳು ಬದಲಾಗಿಲ್ಲ.

	ಪ್ರಾದೇಶಿಕ ಯೋಜನೆಯಲ್ಲಿ ಒಂದು ಭೌಗೋಳಿಕ ಘಟಕದ ಸಮಗ್ರ ವಿಕಾಸದ ಸಂಭಾವ್ಯತೆಯನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಫ್ರೆಂಚ್ ಎಂಜನಿಯರ್ ಹಾಗೂ ಅರ್ಥಶಾಸ್ತ್ರಜ್ಞ ಲೀ ಪ್ಲೇಯ (1806-1882) ಪ್ರಕಾರ ಪರಿಸರ, ಉದ್ಯೋಗ, ಜನತೆ ಇವು ಪರಸ್ಪರ ಪ್ರಭಾವ ಬೀರುತ್ತವೆ. ಉದಾಹರಣೆಗೆ ನದೀಮುಖಜಭೂಮಿಯೊಂದನ್ನು ತೆಗೆದುಕೊಳ್ಳಬಹುದು. ಅಲ್ಲಿಯ ಜನತೆ ಭೂಮಿಯನ್ನೇ ಹೆಚ್ಚಾಗಿ ಅವಲಂಬಿಸಬೇಕಾದ್ದು ಆವಶ್ಯಕವೆಂಬುದು ಪರಿಸರದ ನಿಯಮ. ಬಹಳಮಟ್ಟಿಗೆ ಅದಕ್ಕೆ ಅನುಗುಣವಾಗಿಯೇ ಅಲ್ಲಿಯ ಆರ್ಥಿಕ ವಿಕಾಸ ಆಗಬೇಕಾಗುತ್ತದೆ. ಆದರೆ ಮಹಾನಗರ ಅಥವಾ ಕೈಗಾರಿಕಾ ಪ್ರದೇಶವೊಂದರ ಅಭಿವೃದ್ಧಿ ಯೋಜನೆಯಲ್ಲಿ ಜನರು ಕೆಲಸದ ಮೂಲಕ ಅಲ್ಲಿಯ ಪರಿಸರವನ್ನೇ ತಮ್ಮ ವಿಶಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ತಕ್ಕಮಟ್ಟಿಗೆ ಪರಿವರ್ತಿಸಿಕೊಳ್ಳುವುದು ಸಾಧ್ಯವಿದೆ.

	ಒಟ್ಟಿನಲ್ಲಿ ಪ್ರಾದೇಶಿಕ ಯೋಜನೆಯನ್ನು ಅನ್ವಯಿಸುವಾಗ ಪ್ರಾದೇಶಿಕತೆಯ ಅನೇಕ ಅಂಶಗಳು ಪರಸ್ಪರವಾಗಿ ಪ್ರಭಾವ ಬೀರುವುವಲ್ಲದೆ ಅವುಗಳಿಂದ ಪ್ರತಿಕ್ರಿಯೆಯೂ ಉಂಟಾಗುವುದು. ಈ ಪರಸ್ಪರ ಕ್ರಿಯೆ ಹಾಗೂ ಪ್ರತಿಕ್ರಿಯೆಗಳಿಂದ ಯಾವುದೇ ಒಂದು ಅಂಶದಲ್ಲಾದ ಪರಿವರ್ತನೆಯ ಫಲವಾಗಿ ಉಳಿದ ಅಂಶಗಳಲ್ಲೂ ಪರಿವರ್ತನೆಯುಂಟಾಗುವುದು. ಇದೊಂದು ಶ್ರೇಣಿಕ್ರಿಯೆ. ಇದು ಎರಡು ಬಗೆಯದು: ಒಂದು ಆ ಪ್ರದೇಶದಲ್ಲಿ ಆಂತರಿಕವಾಗಿ ನಡೆಯುವಂಥದು. ಇನ್ನೊಂದು ಬಾಹ್ಯಪರಿಸರಕ್ಕೆ, ನೆರೆಯ ಪ್ರದೇಶಗಳಿಗೆ ಪಸರಿಸುವಂಥದು.

	ಪ್ರಾದೇಶಿಕ ಯೋಜನೆಯ ಅಡಿಯಲ್ಲಿ ಆರಂಭದಲ್ಲಿ ಕೇವಲ ಸ್ಥೂಲ ಚೌಕಟ್ಟನ್ನು ಮಾತ್ರ ಸ್ಥಾಪಿಸಬಹುದು. ಮುಂದಿನ 15-20 ವರ್ಷಗಳಲ್ಲಿ ಅಭಿವೃದ್ಧಿಯ ಸ್ವರೂಪ ಹೇಗಿರಬೇಕೆಂಬುದನ್ನಷ್ಟೇ ಸೂಚಿಸಬಹುದು. ನಿರ್ದಿಷ್ಟವಾದ ಈ ಸ್ಥೂಲ ರೂಪರೇಷೆಯೊಳಗೆ ಕಾರ್ಯಗತಗೊಳಿಸಬೇಕಾದ ಸ್ಥಾನಿಕ ಕಾರ್ಯಕ್ರಮಗಳನ್ನು ನಿರ್ಧರಿಸಲಾಗುವುದು. ಸಾಮಾನ್ಯವಾಗಿ ಈ ರೀತಿಯ ಪ್ರಾದೇಶಿಕ ಯೋಜನೆಗಳು ಒಂದು ಪ್ರದೇಶದಲ್ಲಿಯ ಅಭಿವೃದ್ಧಿಯ ಮುನ್ನೋಟಗಳಾಗಿರುತ್ತವೆ. ಇವು ನಿರ್ದಿಷ್ಟ ಅವಧಿಯಲ್ಲಿ ಪೂರ್ತಿಗೊಳಿಸಬೇಕಾದ ಯಾವುದೇ ವ್ಯಾಪಕವಾದ ಪ್ರಾದೇಶಿಕ ಇಲ್ಲವೇ ರಾಷ್ಟ್ರೀಯ ಯೋಜನೆಗಳನ್ನು ರಚಿಸುವವರಿಗೆ ದೀರ್ಘಕಾಲದವರೆಗೆ ಮಹತ್ವದ ಮಾರ್ಗದರ್ಶನ ನೀಡಬಲ್ಲ ಸಾಧನಗಳಾಗಿರುತ್ತವೆ. ಬೇರೆ ಬೇರೆ ಪ್ರದೇಶಗಳ ಯೋಜನೆಗಳ ವಿವರಗಳಲ್ಲಿ ಅಥವಾ ವ್ಯಾಪ್ತಿಗಳಲ್ಲಿ ಅಂತರಗಳಿದ್ದರೂ ತಾತ್ವಿಕ ಹಾಗೂ ಕಾರ್ಯವಿಧಾನದ ದೃಷ್ಟಿಯಿಂದ ಅವೆಲ್ಲ ಸ್ಥೂಲವಾಗಿ ಒಂದೇ ಆಗಿರುತ್ತವೆ.

	ಪ್ರಾದೇಶಿಕ ಯೋಜನೆಯಲ್ಲಿ ಸ್ಥೂಲವಾಗಿ ಮೂರು ಹಂತಗಳನ್ನು ಗುರುತಿಸಬಹುದು. 1. ಯೋಜನೆಗೆ ಒಳಪಡಿಸಬೇಕಾದ ಪ್ರದೇಶದ ಗಡಿಯ ನಿರ್ಧಾರ; 2. ಆ ಪ್ರದೇಶದ ತೀವ್ರ ಸರ್ವೇಕ್ಷಣೆ ಮತ್ತು ಸುತ್ತಣ ಪ್ರದೇಶದ ವ್ಯಾಪಕ ಸರ್ವೇಕ್ಷಣೆ; 3. ಅಲ್ಲಿಯ ಉಪವಿಭಾಗಗಳ ಅಭಿವೃದ್ಧಿಗಾಗಿ ವಿವರವಾದ ಕಾರ್ಯಕ್ರಮಗಳ ತಯಾರಿಕೆ.

	ಒಂದು ಪ್ರದೇಶದ ವ್ಯವಸ್ಥಿತ ಭವಿಷ್ಯವನ್ನು ಮನಗಂಡು ಅದನ್ನು ಸಾಧಿಸಲು ಅಗತ್ಯವಾದ ಕ್ರಮಗಳನ್ನು ಜಾರಿಗೆ ತರುವುದೇ ಪ್ರಾದೇಶಿಕ ಯೋಜನೆಯ ತತ್ತ್ವ. ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟು ಪರಿಮಾಣದಲ್ಲಿ ದೊರಕುವ ಪ್ರದೇಶಗಳು ರಾಜಕೀಯವಾಗಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದರೂ ಅವನ್ನೆಲ್ಲ ಒಂದೇ ಸೀಮೆಯೆಂದು ಬಗೆಯುವುದು ಪ್ರಾದೇಶಿಕ ಯೋಜನೆಯ ಪರಿಕಲ್ಪನೆ. ಇದಾದ ಮೇಲೆ ಪ್ರಸ್ತುತದಲ್ಲಿ ಹಾಗೂ ಮುಂದೆ ದೊರೆಯಬಹುದಾದ ಸಂಪನ್ಮೂಲಗಳ ವಿಷಯವಾಗಿ ಮಾಡಿದ ಸರ್ವೇಕ್ಷಣೆಯ ಆಧಾರದ ಮೇಲೆ ಆ ಪ್ರದೇಶದಲ್ಲಿ ಎಂಥ ಆರ್ಥಿಕ ವ್ಯವಸ್ಥೆ ನೆಲೆಗೊಳ್ಳಬೇಕೆಂಬುದನ್ನು ನಿರ್ಣಯಿಸಿ ಅದರಂತೆ ಆರ್ಥಿಕ ವಿಕಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದೇಶದ ಪ್ರತಿಯೊಂದು ಪ್ರದೇಶವೂ ತನ್ನ ವಿಭವಕ್ಕೆ (ಪೊಟೆನ್ಷಿಯಾಲಿಟಿ) ಅನುಗುಣವಾಗಿ ಬೆಳವಣಿಗೆ ಹೊಂದಲು ಅವಕಾಶವನ್ನುಂಟುಮಾಡುವುದೇ ಪ್ರಾದೇಶಿಕ ಯೋಜನೆಯ ಉದ್ದೇಶ. ಆದರೆ ಕೇಂದ್ರೀಕೃತ ರಾಷ್ಟ್ರೀಯ ಯೋಜನೆಯ ಮುಖ್ಯ ಉದ್ದೇಶ. ಇಡೀ ದೇಶದ ಸಂಪತ್ತನ್ನು ನಿಗದಿಯಾದ ಪ್ರಮಾಣದಲ್ಲಿ ಹೆಚ್ಚಿಸುವುದಾಗಿರುತ್ತದೆ. ರಾಷ್ಟ್ರೀಯ ಸಂಪತ್ತನ್ನು ಸಮಾಜದ ಅವಶ್ಯಕತೆಗನುಸಾರವಾಗಿಯಾಗಲಿ, ಎಲ್ಲ ಪ್ರದೇಶಗಳ ಸಮತೋಲ ಬೆಳವಣಿಗೆಯ ದೃಷ್ಟಿಯಿಂದಾಗಲಿ ವಿಭಾಗಿಸಲು ಕೇಂದ್ರೀಕೃತ ಯೋಜನೆ ಅಸಮರ್ಥವೆನಿಸುತ್ತದೆ. ಆದ್ದರಿಂದ ರಾಷ್ಟ್ರೀಯ ಯೋಜನೆಗೆ ಪೂರಕವಾಗಿ ಪ್ರಾದೇಶಿಕ ಯೋಜನೆ ಇರುತ್ತದೆ. ರಾಷ್ಟ್ರೀಯ ಯೋಜನೆ ಇಡೀ ದೇಶದ ದೃಷ್ಟಿಯಿಂದ ಪೂರ್ಣೋದ್ಯೋಗ ಹಾಗೂ ರಾಷ್ಟ್ರೀಯ ಸಂಪತ್ತಿನ ಹೆಚ್ಚಳವನ್ನು ಸಾಧಿಸಬಹುದಾದರೂ ದೇಶದ ಎಲ್ಲ ಭಾಗಗಳ ಸಮತೋಲ ಆರ್ಥಿಕ ಪ್ರಗತಿಯನ್ನು ಸಾಧಿಸುವುದರತ್ತ ಅದು ಗಮನ ಹರಿಸದಿರಬಹುದು. ಅಲ್ಲದೆ ಎಲ್ಲ ಪ್ರದೇಶಗಳೂ ಸರಿಯಾಗಿ ಬೆಳವಣಿಗೆ ಹೊಂದದೆ ಹೋದರೆ ಕನಿಷ್ಠ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಮಾಡುವ ಗುರಿಯನ್ನು ನಿಲುಕಲು ಸಾಧ್ಯವಾಗದು. ರಾಷ್ಟ್ರೀಯ ವರಮಾನ ಸಹ ಎಲ್ಲ ಪ್ರದೇಶಗಳಲ್ಲೂ ಸಾಮ್ಯವಾಗಿ ವಿತರಣೆಯಾಗದಿದ್ದರೆ ಯೋಜನೆಯ ಲಾಭವನ್ನು ದೇಶದ ಎಲ್ಲ ಜನರೂ ಪಡೆದುಕೊಳ್ಳಲಾರರು. ಉದ್ಯೋಗಾವಕಾಶಗಳು ಎಲ್ಲೆಡೆಯಲ್ಲೂ ಉಂಟಾಗಬೇಕಾದರೆ ಪ್ರಾದೇಶಿಕ ಅಸಮತೆಯನ್ನು ತೊಡೆದು ಹಾಕುವುದು ಅವಶ್ಯ. ಪ್ರಾದೇಶಿಕ ಯೋಜನೆ ಈ ಗುರಿಯನ್ನು ಸಾಧಿಸುತ್ತದೆ.

	ಪ್ರಾದೇಶಿಕತೆ ಹಾಗೂ ಪ್ರಾಂತೀಯತೆಗಳು ಒಂದೇ ಎಂದು ಗ್ರಹಿಸುವುದು ಸರಿಯಲ್ಲ. ಪ್ರತಿಯೊಂದು ಪ್ರಾಂತ್ಯವೂ ತನಗೆ ಅವಶ್ಯವಿದ್ದ ಎಲ್ಲ ಸರಕುಗಳ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯನ್ನು ಹೊಂದಬೇಕೆಂಬ ವಾದ ಅವಾಸ್ತವಿಕವಾದ್ದು. ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಅನುಕೂಲತಮ ಉಪಯುಕ್ತತೆಯನ್ನು ಪಡೆಯುವದೇ ಪ್ರಾದೇಶಿಕ ಯೋಜನೆಗಳ ಮುಖ್ಯ ಗುರಿ. ಪ್ರಾಂತ್ಯ ಪ್ರಾಂತ್ಯಗಳಲ್ಲಿಯ ಆರ್ಥಿಕ ಅಭಿವೃದ್ಧಿಯ ವಿಷಯವಾಗಿ ಅಸೂಯೆ ಹಾಗೂ ಮಹತ್ವಾಕಾಂಕ್ಷೆಗಳು ಪ್ರಾದೇಶಿಕ ಯೋಜನಾ ತತ್ತ್ವಕ್ಕೆ ವಿಸಂಗತವಷ್ಟೇ ಅಲ್ಲ, ದೇಶಕ್ಕೆ ಹಾನಿಕರವಾಗುತ್ತದೆ.

	ಯೋಜನೆಯ ಅಡಿಯಲ್ಲಿ ಒಂದು ಪ್ರದೇಶ ಅಭಿವೃದ್ಧಿ ಹೊಂದಿದಂತೆ ಆ ಅಭಿವೃದ್ಧಿಯ ವೇಗ ಹಾಗೂ ದಿಕ್ಕನ್ನೂ ಅಂದಂದಿನ ಪರಿಸ್ಥಿತಿಯನ್ನೂ ಪರಿಶೀಲಿಸಬೇಕು. ಅವುಗಳಲ್ಲಿ ಹೂಡಿದ ಬಂಡವಾಳ, ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ, ಸದ್ಯದಲ್ಲಿ ವಿಸ್ತರಣೆಗೆ ಅವಕಾಶ, ಕೆಲಸಗಾರರ ಕುಶಲತೆ. ಇತರ ಕೈಗಾರಿಕೆಗಳನ್ನು ಪ್ರಾರಂಭಿಸುವುದಕ್ಕೆ ಅವಕಾಶ, ಕಚ್ಚಾ ಸಾಮಗ್ರಿಯ ಲಭ್ಯತೆ ಮತ್ತು ಇತರ ಕೈಗಾರಿಕೆಗಳನ್ನು ಪ್ರಾರಂಭಿಸುವ ದೃಷ್ಟಿಯಿಂದ ಆ ಪ್ರದೇಶಗಳ ಸಾಧನೆ ಮುಂತಾದವುಗಳನ್ನು ತಿಳಿದುಕೊಳ್ಳಬೇಕು. ಇದಾದ ಮೇಲೆ ಪ್ರಾದೇಶಿಕ ಯೋಜನೆ ಯಶಸ್ವಿಯಾಗುವಂತೆ ಕೆಲವು ಕಾರ್ಯಗಳನ್ನು ಪೂರೈಸುವುದು ಅವಶ್ಯವಾಗಿದೆ. ಅವುಗಳಲ್ಲಿ ಅತ್ಯಂತ ಮುಖ್ಯವಾದ್ದೆಂದರೆ ಸಾರಿಗೆ ಸೌಕರ್ಯವನ್ನು ಹೆಚ್ಚಿಸುವುದು ಹಾಗೂ ದರಗಳಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡುವುದು. ಕೇವಲ ವ್ಯಾಪಾರದ ದೃಷ್ಟಿಯಿಂದ ನಿರ್ಣಯಿಸಿದ ದರಗಳು ಕೈಗಾರಿಕೆಗಳ ಸುಸಂಬದ್ಧ ಪ್ರಾದೇಶಿಕ ವಿತರಣೆಗೆ ಸಹಾಯಕವಾಗಲಾರವು. ಆದ್ದರಿಂದ ಯೋಜನಾ ಆಯೋಗದ ಪ್ರಥಮ ಕರ್ತವ್ಯವೆಂದರೆ ಸಾರಿಗೆ ದರಗಳಲ್ಲಿ ಯೋಗ್ಯ ಬದಲಾವಣೆ ಮಾಡುವ ಕಾರ್ಯಕ್ಕೆ ಲಕ್ಷ್ಯ ಪೂರೈಸುವುದೇ ಆಗಿರುತ್ತದೆ. ಸಾರಿಗೆ ದರಗಳು ಹೆಚ್ಚಿಗೆ ಇರುವುದರಿಂದಲೇ ಕೈಗಾರಿಕೆಗಳು ಕೆಲವು ಸಲ ನಷ್ಟ ಅನುಭವಿಸುವ ಪ್ರಸಂಗ ಉಂಟಾದಲ್ಲಿ ಸರ್ಕಾರ ಮುಂದಿನ ಸಮತೋಲ ಬೆಳವಣಿಗೆಯ ದೃಷ್ಟಿಯಿಂದ ಆ ನಷ್ಟವನ್ನು ಸಹಾಯಧನದಿಂದ ತುಂಬಿಕೊಡಬೇಕು, ಅಲ್ಲದೆ ಸದ್ಯದ ಮತ್ತು ಮುಂದೆ ಬೆಳೆಯಬಹುದಾದ ಸಮಗ್ರ ಸಾರಿಗೆ ವ್ಯವಸ್ಥೆಯನ್ನು ಕೂಡ ಪ್ರಾದೇಶಿಕ ಯೋಜನೆಗೆ ಪೂರಕವಾಗುವ ರೀತಿಯಲ್ಲಿ ಪುನಃ ರಚಿಸುವುದು ಮಹತ್ವದ್ದಾಗುತ್ತದೆ. ಏಕೆಂದರೆ ಮುಂದೆ ಉತ್ಪಾದಿಸಬಹುದಾದ ಸರಕುಗಳೂ ರಾಷ್ಟ್ರದ ಎಲ್ಲ ಭಾಗಗಳಲ್ಲೂ ಸರಿಯಾಗಿ ಹಂಚಿಕೆಯಾಗಬೇಕು. ಪ್ರಾದೇಶಿಕ ಯೋಜನೆ ಅತ್ಯಂತ ದಕ್ಷತೆಯಿಂದ ತೀರ್ಮಾನಿಸಬೇಕಾದ ವಿಷಯ.

	ಪ್ರಾದೇಶಿಕ ಯೋಜನೆಯ ವಿಚಾರಕ್ಕೂ, ಅಂತರರಾಷ್ಟ್ರೀಯ ಮುಕ್ತ ವ್ಯಾಪಾರದ ತತ್ತ್ವದಲ್ಲಿ ಅಡಕವಾಗಿರುವ ಪ್ರಾದೇಶಿಕ ಶ್ರಮವಿಭಜನೆಯ ಪರಿಕಲ್ಪನೆಗೂ ಬಹಳ ಸಾಮ್ಯವಿದೆ. ರಾಷ್ಟ್ರೀಯ ಪರಮಾಧಿಕಾರ ಹಾಗೂ ವಿವಿಧ ರಾಜಕೀಯ ಪ್ರಣಾಲಿಗಳ ಪ್ರಭಾವದಿಂದಾಗಿ ಮುಕ್ತ ವ್ಯಾಪಾರ ತತ್ತ್ವಕ್ಕೆ ಜಗತ್ತಿನಲ್ಲಿ ಮಾನ್ಯತೆ ಇಲ್ಲವಾಗಿದೆ. ಆದರೆ ಆ ತತ್ತ್ವದ ಪ್ರಯೋಜನವನ್ನು ಒಂದೇ ದೇಶದ ಪರಿಮಿತಿಯೊಳಗಾದರೂ ಪಡೆದುಕೊಳ್ಳಲು ಪ್ರಯತ್ನಿಸುವುದು ಅವಶ್ಯವಾಗಿದೆ.
	ಭಾರತದ ಆರ್ಥಿಕ ವ್ಯವಸ್ಥೆ 1950ರವರೆಗೂ ಯೋಜನಾಬದ್ಧವೂ ಸಮನ್ವಯವುಳ್ಳದ್ದೂ ಆಗಿರಲಿಲ್ಲ. ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆ ಮಂದಗತಿಯದಾಗಿತ್ತು; ಪ್ರಾದೇಶಿಕ ವಿಷಮತೆಯನ್ನು ಹೆಚ್ಚಿಸುವಂಥದಾಗಿತ್ತು. ಕೈಗಾರಿಕೆಗಳು ಮುಂಬಯಿ, ಬಂಗಾಲ ಪ್ರಾಂತ್ಯಗಳಲ್ಲಿ ವಿಶೇಷವಾಗಿ ಕೇಂದ್ರೀಕೃತವಾಗಿದ್ದುವು. ಮದ್ರಾಸ್, ಸಂಯುಕ್ತ ಪ್ರಾಂತ್ಯ (ಉತ್ತರ ಪ್ರದೇಶ). ಪಂಜಾಬ್ ಈ ಪ್ರಾಂತ್ಯಗಳಲ್ಲಿ ಕೃಷಿ ಬೆಳೆವಣಿಗೆ ಹೊಂದಿತ್ತು. ದೇಶದ ಉಳಿದ ಪ್ರಾಂತ್ಯಗಳು ಹಿಂದುಳಿದಿದ್ದುವು. ಇಂಥ ಆರ್ಥಿಕ ದುರವಸ್ಥೆಯನ್ನು ಸರಿಪಡಿಸುವುದಕ್ಕಾಗಿಯೇ ಯೋಜನೆಯನ್ನು ದೇಶ ಸ್ವೀಕರಿಸಿತು. ಹಾಗೂ ರಾಷ್ಟ್ರೀಯ ಯೋಜನೆಯಿಂದ ಪ್ರಾದೇಶಿಕ ವಿಷಮತೆಯನ್ನು ಕ್ರಮೇಣ ಇಲ್ಲದಂತೆ ಮಾಡಬಹುದೆಂದು ಭಾವಿಸಲಾಯಿತು.
	ಭಾರತದ ಪಂಚವಾರ್ಷಿಕ ಯೋಜನೆಗಳು ಸ್ಪಷ್ಟವಾಗಿ ಪ್ರಾದೇಶಿಕತೆಯ ತತ್ತ್ವವನ್ನು ಒಪ್ಪಿಕೊಂಡಿವೆ. ಪ್ರಾದೇಶಿಕ ವಿಷಮತೆಯನ್ನು ಕಡಮೆ ಮಾಡುವ ಉದ್ದೇಶದಿಂದ ಹಿಂದುಳಿದ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿಯ ಉತ್ಪಾದನೆ, ಸರಕುಗಳ ಸಾಗಾಟಕ್ಕೆ ಬೇಕಾಗುವ ಸಾರಿಗೆ ಸೌಲಭ್ಯ ಕಲ್ಪನೆ ಮುಂತಾದ ಸಾಮಾಜಿಕ ಸೌಲಭ್ಯಗಳನ್ನು ಹೆಚ್ಚಿಸುವುದರಲ್ಲಿ ಬಂಡವಾಳವನ್ನು ತೊಡಗಿಸುವುದರಿಂದ ಸಹಜವಾಗಿಯೇ ಆ ಪ್ರದೇಶಗಳು ಬೆಳವಣಿಗೆಯ ಧ್ರುವಕೇಂದ್ರಗಳಾಗುತ್ತವೆ. ಅರ್ಥಶಾಸ್ತ್ರಜ್ಞರನ್ನೂ ಭೌಗೋಲಿಕರನ್ನೂ ನುರಿತ ಆಡಳಿತಗಾರರನ್ನೂ ಒಳಗೊಂಡ ಒಂದು ಪ್ರಾದೇಶಿಕ ಆಡಳಿತ ಮಂಡಲಿಯನ್ನು ಇದಕ್ಕಾಗಿ ರಚಿಸಬೇಕು. ಪ್ರಾದೇಶಿಕ ಯೋಜನೆಗಳನ್ನು ತಯಾರಿಸುವ ಜವಾಬ್ದಾರಿ ಅವುಗಳ ಮೇಲಿರಬೇಕು. ಇಂಥ ಪ್ರಾದೇಶಿಕ ಆಡಳಿತ ಮಂಡಲಿಗಳು ರಚಿಸಿದ ಯೋಜನೆಗಳನ್ನು ಸಮಗ್ರ ರಾಷ್ಟ್ರದ ಆರ್ಥಿಕ ದೃಷ್ಟಿಯಿಂದ ಪರಿಶೀಲಿಸಿ ರಾಷ್ಟ್ರೀಯ ಯೋಜನೆಯಲ್ಲಿ ಸಮಾವೇಶಗೊಳಿಸುವ ಕಾರ್ಯವನ್ನು ಕೇಂದ್ರ ಯೋಜನಾ ಆಯೋಗ ಕೈಗೊಳ್ಳಬೇಕು.
(ಡಿ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ